ವಾಷಿಂಗ್ಟನ್: ಏರ್ ರೇಸಿಂಗ್ ಸ್ಪರ್ಧೆಯ ವೇಳೆ 2 ವಿಮಾನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದಾರೆ ಎಂದು ರೆನೊ ಅಧಿಕಾರಿಗಳು ತಿಳಿಸಿದ್ದಾರೆ. ರೆನೋದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಶಿಪ್ ಏರ್ ರೇಸ್ನ (Reno Air Races) ಕೊನೆಯ ದಿನದಂದು ದುರಂತ ಸಂಭವಿಸಿದೆ.
ಮೃತ ಪೈಲಟ್ಗಳನ್ನು ನಿಕ್ ಮ್ಯಾಸಿ ಮತ್ತು ಕ್ರಿಸ್ ರಶಿಂಗ್ ಎಂದು ಗುರುತಿಸಿದೆ. T-6 ಗೋಲ್ಡ್ ರೇಸ್ನ ಅಂತ್ಯದ ವೇಳೆಗೆ ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ ಎಂದು ರೆನೊ ಏರ್ ರೇಸಿಂಗ್ ಅಸೋಸಿಯೇಷನ್ ತಿಳಿಸಿದೆ.
ಸುರಕ್ಷತೆಯು RARA ದ ಪ್ರಮುಖ ಕಾಳಜಿಯಾಗಿದೆ. ಸಾಧ್ಯವಾದಷ್ಟು ಸುರಕ್ಷಿತವಾದ ಈವೆಂಟ್ ಅನ್ನು ಆಯೋಜಿಸಲು ನಾವು ವರ್ಷಪೂರ್ತಿ ಕೆಲಸ ಮಾಡುತ್ತೇವೆ. ಹೀಗಿದ್ದೂ ದುರಂತವಾಗಿರುವುದು ವಿಷಾದನೀಯ ಎಂದು ಅಸೋಸಿಯೇಷನ್ ತಿಳಿಸಿದೆ. NTSB, FAA ಮತ್ತು ಸ್ಥಳೀಯ ಅಧಿಕಾರಿಗಳು ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಕಳೆದ ವರ್ಷವೂ ವಿಮಾನ ಅಪಘಾತದಲ್ಲಿ ಪೈಲಟ್ ಒಬ್ಬರು ತನ್ನ ಪ್ರಾಣ ಕಳೆದುಕೊಂಡಿದ್ದರು. ಸುರಕ್ಷತಾ ದೃಷ್ಟಿಯಿಂದ ಈವೆಂಟ್ ನಿಲ್ಲಿಸಲು ರೆನೋ-ತಾಹೋ ಏರ್ಪೋರ್ಟ್ ಅಥಾರಿಟಿಯ ನಿರ್ದೇಶಕರ ಮಂಡಳಿಯು ತಿಂಗಳ ಹಿಂದೆ ನಿರ್ಧರಿಸಿತ್ತು. ಆದರೆ 60ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಬಾರಿ ಏರ್ ಶೋ ನಡೆಸಲು ಉದ್ದೇಶಿಸಲಾಗಿತ್ತು.